ಬರ್ಜರನ ರೋಗ - 
ಥ್ರಾಂಬೊ ಆ್ಯಂಜೈಟಿಸ್ ಅಬ್ಲಿಟರಾನ್ಸ್ ಎಂಬ ವ್ಯಾಧಿಯ ವಿಶಿಷ್ಟ ನಾಮ. ಲಿಯೊಬರ್ಜರ್ 1924ರಲ್ಲಿ ಬರೆದ ಪುಸ್ತಕದಲ್ಲಿ ಈ ರೋಗದ ಚಿಹ್ನೆಗಳನ್ನೂ ಚಿಕಿತ್ಸಾಕ್ರಮವನ್ನೂ ವಿವರಿಸಿದ್ದನಾಗಿ ಇವನ ಹೆಸರಿನಿಂದಲೇ ಈ ರೋಗ ಪರಿಚಿತವಾಗಿದೆ. ಈ ಖಾಯಿಲೆ ಯೆಹೂದ್ಯರಲ್ಲಿಯೂ ಪೌರಸ್ತ್ಯರಲ್ಲಿಯೂ ಅಧಿಕವಾಗಿ ಕಾಣಬರುತ್ತದೆ. ಭಾರತದಲ್ಲಿ ಇದರಿಂದ ನರಳುವವರು ಸಾಕಷ್ಟು ಮಂದಿ ಇದ್ದಾರೆ. ಹೆಚ್ಚಾಗಿ ಗಂಡಸರನ್ನು ಕಾಡುವ ರೋಗವಿದು. ಅದೂ ವಯಸ್ಸು 20-40ರ ನಡುವೆ. ಕಾರ್ಮಿಕ ವರ್ಗದವರೂ ಆರ್ಥಿಕವಾಗಿ ಹಿಂದುಳಿದ ವರ್ಗದವರೂ ಈ ರೋಗಕ್ಕೆ ತುತ್ತಾಗುತ್ತಾರೆ. ಧೂಮಪಾನಿಗಳಲ್ಲಿ ಜಾಸ್ತಿ. ಹೊಗೆಸೊಪ್ಪಿನಲ್ಲಿರುವ ನಿಕೊಟೀನ್ ಎಂಬ ರಾಸಾಯನಿಕ ಇದರ ಕಾರಣ.

	ಈ ಖಾಯಿಲೆ ಕೈಕಾಲು ಎರಡಕ್ಕೂ ಬರಬಹುದಾದರೂ ಹೆಚ್ಚಾಗಿ ಕಾಲಿಗೇ ಬರುವುದು. ಸಣ್ಣಗಾತ್ರದ ರಕ್ತನಾಳಗಳು ದಪ್ಪ ಆಗುವುದರಿಂದ ಮತ್ತು ಮುದುಡಿಕೊಳ್ಳುವುದರಿಂದ ಶರೀರದ ಅಂತ್ಯಭಾಗಗಳಿಗೆ ರಕ್ತಪರಿಚಲನೆ ಕಮ್ಮಿಯಾಗುತ್ತದೆ. ರೋಗದ ಪ್ರಾರಂಭದಲ್ಲಿ ಸ್ವಲ್ಪ ದೂರ ನಡೆದರೆ ಕಾಲಿನ ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುವುದು. ರೋಗ ಮುಂದುವರಿದಂತೆ ಆರಾಮದ ವೇಳೆಯಲ್ಲಿಯೂ ನೋವು ಇರುವುದು. ಉಲ್ಬಣಿಸಿದಾಗ ಕಾಲ್ಬೆರಳುಗಳ ಯಾ ಕೈಬೆರಳುಗಳ ಕೊಳೆತ ಪ್ರಾರಂಭವಾಗಿ ಕ್ರಮೇಣ ಪಾದ ಹಾಗೂ ಮೊಣಕಾಲಿಗೆ ಹರಡುವುದು.

	ಈ ಖಾಯಿಲೆಯಲ್ಲಿ ಮಧ್ಯಮ ಹಾಗೂ ಸಣ್ಣಗಾತ್ರದ ಧಮನಿಗಳು ದಪ್ಪಗಾಗಿ ಉರಿತಕ್ಕೊಳಗಾಗುತ್ತದೆ. ಕಾಲಿನಲ್ಲಿ ನಾಡಿಬಡಿತ ಸಿಕ್ಕುವುದಿಲ್ಲ. ರಕ್ತಪರಿಚಲನೆ ಕಮ್ಮಿ ಆಗುವುದರಿಂದ ಕಾಲನ್ನು ಮೇಲೆತ್ತಿಟ್ಟರೆ ಅದರ ಬಣ್ಣ ಬಿಳುಪೇರುವುದು. ಆಗ ಅಭಿಧಮನಿಗಳು ಕುಗ್ಗುತ್ತವೆ. ತೊಡೆಯ ಧಮನಿಚಿತ್ರಿಕೆ ಬರ್ಜರನ ರೋಗ ಹಾಗೂ ಅಪಧಮನಿ ಪೆಡಸಣೆಗಳನ್ನು ಬೇರ್ಪಡಿಸಲು ಸಹಾಯಕವಾಗುತ್ತದೆ.
(ಟಿ.ಎನ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ